ನೀಕೊಲಾಯಿ, ಕ್ರಿಸ್ಟೊಫ್ ಫ್ರೀಡ್ರಿಕ್
	1733-1811. ಜರ್ಮನಿಯ ಲೇಖಕ, ವಿಮರ್ಶಕ ಹಾಗೂ ಪುಸ್ತಕ ವ್ಯಾಪಾರಿ. ಹುಟ್ಟಿದ್ದು ಬರ್ಲಿನ್ನಿನಲ್ಲಿ. ಈತನ ತಂದೆ ಕ್ರಿಸ್ಟೊಫ್ ಗಾಟ್ಲೀಬ್ ನೀಕೊಲಾಯಿ ಪ್ರಸಿದ್ಧ ಪುಸ್ತಕ ವ್ಯಾಪಾರಿ. ತಂದೆಯೊಡನೆ ಪುಸ್ತಕ ವ್ಯಾಪಾರ ಮಾಡುತ್ತಲೇ ಆಂಗ್ಲ ಸಾಹಿತ್ಯದ ಪರಿಚಯ ಮಾಡಿಕೊಂಡ. 1752ರಲ್ಲಿ ಅಂಗಡಿಯ ಮಾಲೀಕನಾಗಿ ಅದನ್ನು ಒಂದು ಪ್ರಮುಖ ಸಂಸ್ಥೆಯನ್ನಾಗಿ ಬೆಳೆಸಿದ. ಸಾಹಿತ್ಯದ ವಾದವಿವಾದಗಳಲ್ಲಿ ಭಾಗವಹಿಸಿ ಜೆ. ಸಿ. ಗಾಟ್‍ಷೆಡ್‍ನ ಟೀಕೆಗಳಿಗೆ ಉತ್ತರವಾಗಿ ಮಿಲ್ಟನ್ ಕವಿಯನ್ನು ಸಮರ್ಥಿಸಿದ. 1755ರಲ್ಲಿ ಅನಾಮಧೇಯವಾಗಿ ಪ್ರಕಟವಾದ ಬ್ರೀಫ್ ವ್ಯೂಬರ್ ಡೆನ್ ಯೆಟ್ಸಿಗೆನ್ ಟ್ಸುಶ್ಟಾಂಟ್ ಡೆಲ್ ಶೋನೆನ್ ವಿಸೆನ್‍ಷಾಫ್ಟೆನ್ ಇನ ಡಾಯಿಟ್ಷ್‍ಲಾಂಡ್ ಎಂಬ ಈತನ ಲೇಖನಗಳು ಗಾಟ್‍ಷೆಡ್ ಮತ್ತು ಆತನ ಎದುರಾಳಿಗಳನ್ನು ವಿರೋಧಿಸಿ ಬರೆದುದಾಗಿದ್ದವು. ಆಂಗ್ಲ ಸಾಹಿತ್ಯದಲ್ಲಿ ಈತ ತೋರಿಸುತ್ತಿದ್ದ ಆಸಕ್ತಿಯಿಂದಾಗಿ ಲೆಸಿಂಗ್ ಹಾಗೂ ಮೋಸೆಸ್ ಮೆಂಡಲ್ ಸೋನ್ ಇವರೊಡನೆ ಸಖ್ಯ ಬೆಳೆಯಿತು. ಮುಂದೆ ಮೆಂಡಲ್ ಸೋನನ ಸಹಕಾರದಿಂದ ಈತ ಬಿಬ್ಲಿಯೋತೀಕ್ ಡೆರ್ ಶ್ಯೋನೆನ್ ವಿಸೆನ್‍ಷಾಫ್ಟೆನ್ ಎಂಬ ವಿಮರ್ಶೆಗೆ ಮೀಸಲಾದ ನಿಯತಕಾಲಿಕವೊಂದನ್ನು ನಡೆಸಿದ (1757-60). ಆ ನಿಯತಕಾಲಿಕ ಆರಂಭದಲ್ಲಿ ಈತ ವರ್ಷದ ಅತ್ಯುತ್ತಮ ದುರಂತ ನಾಟಕವೊಂದಕ್ಕೆ ಬಹುಮಾನ ಕೊಡುವುದಾಗಿ ಘೋಷಿಸಿದ. ಮೊದಲ ಸಂಚಿಕೆಯಲ್ಲೇ ದುರಂತ ನಾಟಕಕ್ಕೆ ಒಂದು ಪ್ರಬಂಧವನ್ನೂ ಪ್ರಕಟಿಸಿದ. ಲೆಸಿಂಗ್ ಮತ್ತು ಮೆಂಡೆಲ್ ಸೋನ್ ಇವರ ಸಹಕಾರದೊಡನೆ ಬ್ರೀಫೆ, ಡೀ ನಾಯೆಸ್ಟೆ ಲಿಟರಾಟೂರ್ ಬ್ರಿಟೆಫೆಂಟ್ ಎಂಬ ಇನ್ನೊಂದು ಸಾಹಿತ್ಯದ ನಿಯತಕಾಲಿಕವನ್ನು ನಡೆಸಿದ (1759-65). 1765ರಿಂದ 1792ರ ವರೆಗೆ ಈತ ಆಲ್‍ಗೆಮೈನ್ ಡಾಯಿಟ್‍ಷೆ ಬಿಬ್ಲಿಯೋತಿಕ್ ಎಂಬ ಪತ್ರಿಕೆಯ ಸಂಪಾದಕನಾಗಿ ದುಡಿದ. ಈ ಪತ್ರಿಕೆ ಧರ್ಮದಲ್ಲಿ ಅಧಿಕಾರ ಹಾಗೂ ಸಾಹಿತ್ಯದಲ್ಲಿ ಅತಿವರ್ತನೆ ಎಂದು ಕರೆಯಲಾಗುತ್ತಿದ್ದುದರ ವಿರುದ್ಧವಾಗಿತ್ತು. ಈತ ಹರ್ಡರ್, ಗಯಟೆ, ಷಿಲರ್, ಕಾಂಟ್ ಮತ್ತು ಫಿಕ್ಟೆ ಇವರುಗಳ ಸಾಹಿತ್ಯದಲ್ಲಿನ ಹೊಸ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ತೀರ ಅಸಮರ್ಥನಾಗಿದ್ದ. ಕ್ರಮೇಣ ಈತ ಜರ್ಮನ್ ವಿಚಾರವಾದಿಗಳಿಂದ ದೂರವಾಗಿ ಅವರನ್ನು ಟೀಕೆ ಮಾಡತೊಡಗಿದ. ಸಾಹಿತ್ಯದಲ್ಲಿನ ಹೊಸ ವಿಚಾರಗಳ ವಿರೋಧಿಯಾದ ಈತ ಹರ್ಡರ್, ಗಯಟೆ ಹಾಗೂ ಷಿಲರರ ಟೀಕೆಗಳಿಗೆ ಗುರಿಯಾಗಬೇಕಾಯಿತು. ಆದರೆ, ಈತನ ನಿಜವಾದ ಯೋಗ್ಯತೆಯ ಕಡೆಗೆ ಯಾರ ಗಮನವೂ ಹರಿಯಲಿಲ್ಲ. 

	ಜರ್ಮನ್ ಸಾಹಿತ್ಯದಲ್ಲಿ ಈತನಿಗಿದ್ದ ಆಸಕ್ತಿ ಈತ ನಡೆಸುತ್ತಿದ್ದ ಪತ್ರಿಕೆಗಳೇ ಸಾಕ್ಷಿ. ಅವು ಸಮಕಾಲೀನ ಸಾಹಿತ್ಯ ಮತ್ತು ಸಮಾಜದ ಮೇಲೆ ಸಾಕಷ್ಟು ಬೆಳಕು ಬೀರಿದುವು.								(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ